ವಿಲಿಯಮ್ಸ್, ವಿಲಿಯಮ್ ಕಾರ್ಲೋಸ್
	1883-1963. ಅಮೆರಿಕದ ಕವಿ, ಕಾದಂಬರಿಕಾರ. ವೃತ್ತಿಯಲ್ಲಿ ವೈದ್ಯ. ನ್ಯೂಜೆರ್ಸಿಯ ರುದರ್‍ಫರ್ಡ್‍ನಲ್ಲಿ 1883ರಲ್ಲಿ ಜನಿಸಿದ. ಜಿನೀವದಲ್ಲಿ ವಿದ್ಯಾಭ್ಯಾಸ ಮಾಡಿದ. ದಿ ಟೆಂಪರ್ಸ್ (1913), ಕೊರ ಇನ್ ಹೆಲ್ (1920), ಸವರ್ ಗ್ರೇಪ್ಸ್ (1921), ಸ್ಪ್ರಿಂಗ್ ಅಂಡ್ ಆಲ್ (1922)-ಇವು ಈತನ ಕೆಲವು ಕವನ ಸಂಕಲನಗಳು. ತನ್ನ ಆತ್ಮಕಥೆಯಲ್ಲಿ (1951) ಸಾಹಿತ್ಯ ಜೀವನದ ಮೇಲೆ ವೈದ್ಯವೃತ್ತಿಯ ಪ್ರಭಾವ ಬಹಳವಾಗಿದೆ ಎಂದು ಹೀಗೆ ಹೇಳಿಕೊಂಡಿದ್ದಾನೆ: “ಈ ವೃತ್ತಿಯ ಮೂಲಕ ಆತ್ಮದ ರಹಸ್ಯತಮ ತೋಟಗಳಿಗೆ ನನಗೆ ಪ್ರವೇಶ ಸಿಕ್ಕಿದೆ. ಆ ಕೊಲ್ಲಿ, ಕೊರಕಲುಗಳಿಗೆ ಈ ದುರ್ಬಲವಾದ ಪರಾಭವಗೊಂಡ ಶರೀರವನ್ನು ಎಳೆದೊಯ್ಯಲು ರಹದಾರಿಯಾಗಿದೆ.” ಈತ ವಿದ್ಯಾರ್ಥಿ ದಿಸೆಯಲ್ಲಿ ಎಜ್ರಪೌಂಡ್‍ನ ಅನುಯಾಯಿಯಾಗಿದ್ದ. ಆತ ಪ್ರತಿಪಾದಿಸುತ್ತಿದ್ದ ಸಂಕೇತಾತ್ಮಕ ಕಾವ್ಯದ ಆರಾಧಕನಾಗಿ ಮೊದಮೊದಲು ಈತ ಎಂಟು ಸಾಲುಗಳ, ಹದಿನಾರು ಪದಗಳ ಮಿತವೆನಿಸುವ ಪದ್ಯಗಳನ್ನು ಬರೆದ. ದ ರೆಡ್ ವ್ಹೀಲ್‍ಬ್ಯಾರೋದಲ್ಲಿ (1923) ಈ ಮಾದರಿಯ ಕಾವ್ಯವಿದೆ. ಅಲ್ಲಿಂದ ಪೇಟರ್‍ಸನ್ (1946-58) ವರೆಗೆ ಇವನು ಹಾಕಿದ ಹೆಜ್ಜೆ ದೊಡ್ಡದು. ಪೇಟರ್‍ಸನ್ ನಾಲ್ಕು ಸಂಪುಟಗಳಲ್ಲಿದೆ. ಇದು ಅಮೆರಿಕದ ಸಾಂಸ್ಕøತಿಕ ಪರಂಪರೆಯ ಮಹಾಕಾವ್ಯವೆನಿಸಿದೆ. ಇದಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ವೈಟ್ ಮ್ಯೂಲ್ (1937), ಇನ್ ದಿ ಮನಿ (1940), ದಿ ಬಿಲ್ಡ್-ಅಪ್ (1950) ಇವು ಈತನ ಕಾದಂಬರಿಗಳು. ದಿ ನೈಫ್ ಆಫ್ ದಿ ಟೈಮ್ಸ್ (1932), ಮೇಕ್ ಲೈಟ್ ಆಫ್ ಇಟ್  (1950)-ಇವು ಕಥಾಸಂಕಲನ ಗಳು. ಈತ ಕೆಲವು ವಿಮರ್ಶಾ ಗ್ರಂಥಗಳನ್ನೂ ಜೀವನ ಚರಿತ್ರೆಯನ್ನೂ ಬರೆದಿದ್ದಾನೆ. ಅಮೆರಿಕದಲ್ಲಿ ಇವನ ಪ್ರಸಿದ್ಧಿ ಹೆಚ್ಚುತ್ತಿದ್ದರೂ 1950ರ ದಶಕದ ವರೆಗೂ ಇಂಗ್ಲೆಂಡಿನಲ್ಲಿ ಇವನು ಹೆಚ್ಚು ಚರ್ಚಿತನಾಗಲಿಲ್ಲ. 1933ರ ವೇಳೆಗಾಗಲೇ ಎಫ್.ಆರ್.ಲೀವೀಸ್, ಕಾರ್ಲೋಸ್ ವಿಲಿಯಮ್ಸ್‍ರ ಬರೆಹಗಳು ಹಳೆಯದಾದವು ಎಂದು ತಿಳಿಯಲಾಗಿತ್ತು. ಡಿ.ಎಚ್.ಲಾರೆನ್ಸ್ ಈತನನ್ನು ಗಂಭೀರವಾಗಿ ಪರಿಗಣಿಸಿದ. ಇತ್ತೀಚೆಗೆ ಮತ್ತೆ ಈತನ ಬರೆಹ ಗಮನ ಸೆಳೆಯುತ್ತಿದೆ. ಈತನಿಗೆ ಬಫೆಲೊ, ರುಟ್‍ಗರ್ ಮುಂತಾದ ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್ ಪದವಿ ದೊರೆತಿದೆ. ಈತ 1963ರಲ್ಲಿ ನಿಧನನಾದ.				
		(ಎಮ್.ಕೆ.ಎನ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ